RESEARCH STUDIES AND ITS TYPES

From WikiEducator
Jump to: navigation, search

ಉದ್ದೇಶಗಳು

ಈ ಸಾಹಿತ್ಯವು ನಿಮಗೆ

  1. ಸಂಶೋಧನೆಯ ವಿಧಗಳ ಕುರಿತಂತೆ ಮಾಹಿತಿ ನೀಡುವುದು
  2. ಪ್ರಯೋಗಾಲಯ ಕ್ಷೇತ್ರ ಅಧ್ಯಯನ ಹಾಗೂ ಬಹುಕೇಂದ್ರಿತ ಅಧ್ಯಯನಗಳನ್ನು ಕೈಗೊಳ್ಳಲು ಬೇಕಾದ ಮಾಹಿತಿ ಹಾಗೂ ಮಾರ್ಗದರ್ಶನ ನೀಡುವುದು

ಸಂಶೋಧನೆಯ ವಿಧಗಳು

ಶಿಕ್ಷಣ ಕ್ಷೇತ್ರಕ್ಕೆ ಪ್ರಸ್ತುತವಾಗಬಲ್ಲ ಅಧ್ಯಯನಗಳ ಕುರಿತಂತೆ ಆರಂಭದಲ್ಲಿ ಚರ್ಚಿಸಿದೆವು. ಇವುಗಳಲ್ಲಿ ಕ್ರಿಯಾ ಸಂಶೋಧನೆ ಕುರಿತಂತೆ ಈಗಾಗಲೇ ಸಾಕಷ್ಟು ತರಬೇತಿಗಳು ನಡೆದಿದ್ದು ತರಬೇತಿ ಸಾಹಿತ್ಯವನ್ನು ಸರ್ವ ಶಿಕ್ಷಣ ಅಭಿಯಾನ, ಕರ್ನಾಟಕ ದ ವತಿಯಿಂದ ಮುದ್ರಿಸಿ ಎಲ್ಲ ಶಾಲೆಗಳಿಗೂ ಸರಬರಾಜು ಮಾಡಲಾಗಿದೆ. ಅದರ ಹೊರತಾದ ಬಹಳಷ್ಟು ಓದುವ ಸಾಹಿತ್ಯವನ್ನು ಇಲ್ಲಿನ ಬೇರೆ ಅಧ್ಯಾಯಗಳಲ್ಲಿ ನೀಡಲಾಗಿದೆ. ಪ್ರಯೋಗಾಲಯ ಕ್ಷೇತ್ರ ಅಧ್ಯಯನಗಳು ಹಾಗೂ ಬಹು ಕೇಂದ್ರಿತ ಅಧ್ಯಯನಗಳು ನಮಗೆ ಸ್ವಲ್ಪ ಹೊಸತು. ಇವುಗಳ ಬಗ್ಗೆ ಇಲ್ಲಿ ಪರಿಚಯ ಮಾಡಿಕೊಳ್ಳೋಣ.

ಪ್ರಯೋಗಾಲಯ ಕ್ಷೇತ್ರ ಅಧ್ಯಯನಗಳು

ಹೆಸರೇ ಸೂಚಿಸುವಂತೆ ಈ ಅಧ್ಯಯನದಲ್ಲಿ ಒಂದು ಪ್ರಯೋಗಾಲಯ ಕ್ಷೇತ್ರವಿದೆ. ಇಲ್ಲಿ ನಾವು ಅರ್ಥೈಸಿಕೊಳ್ಳಲು ಇಚ್ಛಿಸುವ ಥೀಮ್ ಗಳನ್ನು ಒಂದು ಚಿಕ್ಕ ಗುಂಪಿನ ಮೇಲೆ ಪ್ರಯೋಗಿಸಿ ಅದರ ಪರಿಣಾಮಗಳನ್ನು ತಿಳಿಯಬಹುದು. ಉದಾಹರಣೆಗೆ ಶಾಲೆಯಲ್ಲಿ ಗ್ರಂಥಭಂಡಾರವನ್ನು ನಿರ್ವಹಿಸುವುದು ಹೇಗೆ ಎನ್ನುವ ಬಗ್ಗೆ ನಿಮಗೆ ನಿಮ್ಮದೇ ಆದ ವಿಚಾರಗಳಿವೆ ಎಂದಿಟ್ಟುಕೊಳ್ಳೋಣ. ನಿಮ್ಮ ವಿಚಾರಗಳು ಹೇಗೆ ಅನುಷ್ಠಾನಕ್ಕೆ ಬರಬಹುದು ಎಂಬ ಬಗ್ಗೆ ನಿಮಗೆ ಯಾವುದೇ ಪ್ರಾಯೋಗಿಕ ಮಾಹಿತಿ ಇಲ್ಲದಿರುವಾಗ ಆ ವಿಚಾರಗಳನ್ನು ನೇರವಾಗಿ ಜಿಲ್ಲೆಯ ಎಲ್ಲ ಶಾಲೆಗಳಲ್ಲಿಯೂ ಅನುಷ್ಠಾನಿಸುವುದು ಅಷ್ಟೊಂದು ಸಮಂಜಸವಾಗಲಾರದು. ಮೊದಲಿಗೆ ಒಂದು ಚಿಕ್ಕ ಕ್ಷೇತ್ರದಲ್ಲಿ, ಅಂದರೆ ನಿಮ್ಮ ವ್ಯಾಪ್ತಿಯಲ್ಲಿ ಬರುವ ಕೆಲವು ಶಾಲೆಗಳಲ್ಲಿ ಮೊದಲಿಗೆ ಅವುಗಳನ್ನು ಅನುಷ್ಠಾನಿಸಿ ನೋಡುವುದು ಅಪೇಕ್ಷಣೀಯ. ಇದರಿಂದ ಸದರಿ ಕಾರ್ಯಕ್ರಮವನ್ನು ವಿಸ್ತರಿಸುವಾಗ ಯಾವ ರೀತಿಯ ಮುನ್ನೆಚ್ಚರಿಕೆಗಳನ್ನು ಹೊಂದಿರಬೇಕು, ಯಾವ ವಿವರಗಳಿಗೆ ಹೆಚ್ಚಿನ ಗಮನ ನೀಡಬೇಕು ಎನ್ನುವುದು ಸ್ಪಷ್ಟವಾಗುತ್ತದೆ. ಈ ರೀತಿಯಾಗಿ ನಡೆಸುವ ಅಧ್ಯಯನಗಳಿಗೆ ಪ್ರಯೋಗಾಲಯ ಕ್ಷೇತ್ರ ಅಧ್ಯಯನಗಳು ಎನ್ನುತ್ತೇವೆ.

"ಪ್ರಾಥಮಿಕ ಶಿಕ್ಷಣದ ಗುಣಮಟ್ಟವನ್ನು ಉತ್ತಮ ಪಡಿಸುವುದಕ್ಕಾಗಿ ತಾನು ಹೆಚ್ಚು ವೃತ್ತಿಪರವಾಗಲು ಜಿಲ್ಲಾ ಪ್ರಶಿಕ್ಷಣ ಸಂಸ್ಥೆಯು ತನ್ನ ಕಾರ್ಯವ್ಯಾಪ್ತಿಯೊಳಗೆ ಪ್ರಯೋಗ, ಸಂಶೋಧನೆ ಮತ್ತು ಅಧ್ಯಯನಗಳನ್ನು ಕೈಗೊಳ್ಳಲು ಆಯ್ಕೆ ಮಾಡಿಕೊಳ್ಳುವ ನಿರ್ದಿಷ್ಟ ಕಾರ್ಯಕ್ಷೇತ್ರವೇ ಪ್ರಯೋಗಾಲಯ ಕ್ಷೇತ್ರ."

ಡಿ ಎಸ್ ಇ ಆರ್ ಟಿ, ಕರ್ನಾಟಕ ಹಾಗೂ ಪ್ರಾದೇಶಿಕ ಶಿಕ್ಷಣ ಸಂಸ್ಥೆ, ಮೈಸೂರು ಇವರ ಸಹಭಾಗಿತ್ವದಲ್ಲಿ ೨೦೦೪-೦೫ ರಲ್ಲಿ ಟೆಲೆ ಕಾನ್ಪರೆನ್ಸ್ ಮೂಲಕ ಪ್ರಯೋಗಾಲಯ ಕ್ಷೇತ್ರ ಅಧ್ಯಯನಗಳ ಕುರಿತಂತೆ ತರಬೇತಿ ನೀಡಲಾಗಿತ್ತು. ಅದಕ್ಕಾಗಿ ತಯಾರಿಸಿದ ಸಾಹಿತ್ಯವನ್ನು ಎಲ್ಲ ಡಯಟ್ ಗಳಿಗೂ ಸರಬರಾಜು ಮಾಡಲಾಗಿತ್ತು. ಮುಂದಿನ ಲಿಂಕ್ ಕ್ಲಿಕ್ಕಿಸಿದರೆ ನೀವು ಆ ಸಾಹಿತ್ಯವನ್ನು ಓದಬಹುದು.

Lab Area Studies[1]

ಬಹುಕೇಂದ್ರಿತ ಅಧ್ಯಯನಗಳು

ಶಿಕ್ಷಣ ಸಂಶೋಧನೆಗಳಲ್ಲಿ ಬಹುಕೇಂದ್ರಿತ ಅಧ್ಯಯನಗಳಿಗೆ ವಿಶಿಷ್ಠ ಮಹತ್ವವಿದೆ. ಇವು ಪಾಲಿಸಿ ಸಂಶೋಧನೆಗಳು. ಯಾವುದೇ ಒಂದು ಆಚರಣೆ, ಮಧ್ಯವರ್ತನೆ ಕ್ಷೇತ್ರ ಮಟ್ಟದಲ್ಲಿ ಯಾವ ರೀತಿ ಪರಿಣಾಮ ಬೀರುತ್ತಿದೆ ಎನ್ನುವುದನ್ನು ತಿಳಿಯುವುದು ಇದರ ಒಂದು ಮುಖ್ಯ ಉದ್ದೇಶ. ಇಲಾಖೆಯು ಶಿಕ್ಷಣಾಭಿವೃದ್ಧಿಗಾಗಿ ವಿವಿಧ ಕಾರ್ಯಕ್ರಮಗಳನ್ನು ಆಯೋಜಿಸುತ್ತದೆ. ಈ ಕಾರ್ಯಕ್ರಮಗಳು ನಿಜಕ್ಕೂ ಫಲಪ್ರದವಾಗಿವೆಯೇ, ಅವುಗಳ ಉದ್ದೇಶ ಸಾಧನೆ ಆಗಿದೆಯೇ ಎಂದು ಹಿಮ್ಮಾಹಿತಿ ಪಡೆಯುವುದು ಇಲಾಖೆಗೆ ಬಹಳ ಮುಖ್ಯ. ಈ ಹಿಮ್ಮಾಹಿತಿಯ ಆಧಾರದಲ್ಲಿ ಬದಲಾವಣೆಗಳನ್ನು ಮಾಡಿಕೊಂಡು ಹೊಸ ಪಾಲಿಸಿಗಳನ್ನು ಪ್ರಕಟಿಸಬೇಕಾಗುತ್ತದೆ. ಇದಕ್ಕಾಗಿಯೇ ಬಹುಕೇಂದ್ರಿತ ಅಧ್ಯಯನಗಳನ್ನು ಪಾಲಿಸಿ ರಿಸರ್ಚ್ ಎಂದು ಕೂಡಾ ಹೇಳುತ್ತಾರೆ.

ಬಹು ಕೇಂದ್ರಿತ ಅಧ್ಯಯನಗಳ ಕುರಿತಂತೆ ಆರ್ ಇ ಎಂ ಎಸ್ ಮಧ್ಯವರ್ತನೆಯಡಿಯಲ್ಲಿ ತರಬೇತಿ ಸಾಹಿತ್ಯ ರಚಿಸಲಾಗಿತ್ತು. ಈ ಸಾಹಿತ್ಯವನ್ನು ಎಲ್ಲ ಡಯಟ್ ಗಳಿಗೂ ಸರಬರಾಜು ಮಾಡಲಾಗಿತ್ತು. ಅಂತೆಯೇ ಸರ್ವ ಶಿಕ್ಷಣ ಅಭಿಯಾನವು ಕೂಡಾ ೨೦೦೮-೦೯ ರಲ್ಲಿ ವಿವಿಧ ತರಬೇತಿಗಳ ಪರಿಣಾಮಕತೆ ಕುರಿತಂತೆ ಬಹುಕೇಂದ್ರಿತ ಅಧ್ಯಯನಗಳನ್ನು ಕೈಗೊಂಡಿತ್ತು. ಸ ಶಿ ಅಭಿಯಾನ ಈಗಾಗಲೇ ಸರಬರಾಜು ಮಾಡಿರುವ ಸಾಹಿತ್ಯವನ್ನು ಈ ಕೆಳಗಿನ ಲಿಂಕ್ ಕ್ಲಿಕ್ಕಿಸಿದರೆ ಓದಬಹುದು.

ಬಹು ಕೇಂದ್ರಿತ ಅಧ್ಯಯನಗಳು[2]